ಜಿಲ್ಲಾದ್ಯಂತ ರಾಮಧ್ಯಾನ: ಎಲ್ಲೆಲ್ಲೂ ಪೂಜೆ, ಹೋಮ, ಪ್ರಸಾದ ಅಯೋಧ್ಯೆಯಲ್ಲಿ ಸೋಮವಾರ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆ ಶಿವಮೊಗ್ಗ ಜಿಲ್ಲಾದ್ಯಂತ ವಿಶೇಷ ಪೂಜೆ, ಪುನಸ್ಕಾರದ ಮೂಲಕ ಭಕ್ತರು ರಾಮನಾಮ ಜಪವನ್ನು ಮೊಳಗಿಸಿದರು. ನಗರದಲ್ಲಿ ಗಲ್ಲಿ ಗಲ್ಲಿಯಲ್ಲಿಯೂ ರಾಮೋತ್ಸವ ನಡೆಯಿತು. ಬೆಳಗ್ಗಿನಿಂದಲೇ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯ ಭಕ್ತಿ ಹಾಗೂ ಸಂಭ್ರಮ ಜಿಲ್ಲೆಯಲ್ಲೂ ಮುಗಿಲುಮುಟ್ಟಿತ್ತು. ನಗರದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಬಹುತೇಕ ದೇವಾಲಯಗಳಲ್ಲಿ ರಾಮತಾರಕ ಹವನ, ಜಪಯಜ್ಞ ಮತ್ತು ಕಲಾವಿದರಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕ ಸಂಘ ಸಂಸ್ಥೆಗಳು, ಬೀದಿ ಬೀದಿಗಳಲ್ಲಿ ಕೇಸರಿ ಬಾವುಟಗಳನ್ನು ಹಾರಿಸಿ, ಬೃಹತ್ ರಾಮಲಲ್ಲಾನ ಕಟೌಟ್ಗಳನ್ನು ಸ್ಥಾಪಿಸಿ ಬೆಳಗ್ಗೆಯಿಂದಲೇ ಸಾರ್ವಜನಿಕರಿಗೆ ಪಾನಕ, ಕೋಸಂಬರಿ ಮತ್ತು ಉಪಾಹಾರ ವಿತರಿಸಿದರು.